ದೊಂಬಿ -
ಹಲವು ಜನರು ಗುಂಪುಗೂಡಿ ಅಥವಾ ಒಂದಾಗಿ ಸೇರಿ ಎಸಗಿದ ಹಿಂಸಾತ್ಮಕ ಶಾಂತಿಭಂಗ. ಒಂದಿಲ್ಲೊಂದು ರೀತಿಯ ಹಲ್ಲೆ ನಡೆಸುವುದಕ್ಕೆ ಸಾಮಾನ್ಯವಾಗಿ ದೊಂಬಿ ಎನ್ನುತ್ತೇವೆ. ದೊಂಬಿ ಘಟಿಸಿದಾಗ ಪ್ರಾಣಾಪತ್ತು, ಸ್ವತ್ತಿಗೆ ನಷ್ಟ ಸಂಭವಿಸುತ್ತವೆ.     

	ದೊಂಬಿ ದಂಡಾರ್ಹವೆನಿಸಬೇಕಾದರೆ ಭಾರತೀಯ ದಂಡ ಸಂಹಿತೆಯಲ್ಲಿ ನಮೂದಿಸಿರುವ ಅಂಶಗಳ ಕಕ್ಷೆಯೊಳಗೆ ಬರಬೇಕು. ಕೇಂದ್ರ ಅಥವಾ ರಾಜ್ಯ ಸರ್ಕಾರವನ್ನು ಬುಡಮೇಲು ಮಾಡುವುದು, ಅವುಗಳ ಸಂಪತ್ತನ್ನು ಸ್ವಾಧೀನ ಪಡಿಸಿಕೊಳ್ಳುವುದು, ಕಾನೂನಿನ ಜಾರಿಯನ್ನು ಪ್ರತಿರೋಧಿಸುವುದು, ಯಾವುದೇ ವ್ಯಕ್ತಿಯ ಅಭೌತಿಕ ಹಕ್ಕನ್ನೊ ಆಸ್ತಿಯನ್ನೋ ಬಲಾತ್ಕಾರವಾಗಿ ವಶಪಡಿಸಿಕೊಳ್ಳುವುದು ಮುಂತಾದ ದುರುದ್ದೇಶಗಳನ್ನು ಹೊಂದಿ ಅವನ್ನು ಸಾಧಿಸಲು ಐವರು ಅಥವಾ ಅದಕ್ಕೂ ಹೆಚ್ಚುಮಂದಿ ಒಂದೆಡೆ ಕಲಿತು, ಅನ್ಯಾಯಿಕ ಕೃತ್ಯವನ್ನೆಸಗಲು ಬಲಾತ್ಕಾರವಾಗಿ ಹಿಂಸೆ ಪ್ರಯೋಗ ಮಾಡಿದರೆ ಅಂಥ ಕೃತ್ಯ ದೊಂಬಿ ಎನಿಸುತ್ತದೆ. ಭಾರತೀಯ ದಂಡಸಂಹಿತೆಯ 146ನೆಯ ಖಂಡದಲ್ಲಿ ದೊಂಬಿಯ ವ್ಯಾಖ್ಯೆಯಿದೆ.         

	ದೊಂಬಿಯ ಅಪರಾಧ ಎಸಗಿದವನಿಗೆ ಭಾರತೀಯ ದಂಡಸಂಹಿತೆಯ 147ನೆಯ ಖಂಡದ ಪ್ರಕಾರ ಎರಡು ವರ್ಷಗಳವರೆಗೆ ವ್ಯಾಪಿಸಬಹುದಾದ ಕಾಲಾವಧಿಯ ಯಾವುದೇ ಬಗೆಯ ಕಾರಾವಾಸ ಇಲ್ಲವೆ ದಂಡ ಇಲ್ಲವೆ ಅವೆರಡನ್ನೂ ವಿಧಿಸಬಹುದು.  ಒಂದು ವೇಳೆ ಅಂಥ ಕಾನೂನುಬಾಹಿರ ಸಮೂಹದ ಯಾವನಾದರೂ ಒಬ್ಬಾತ ಪ್ರಾಣನಾಶಕ ಆಯುಧದಿಂದ ಸಜ್ಜಾಗಿ ಅನ್ಯಾಯಿಕ ಕೃತ್ಯವನ್ನೆಸಗಲು ಅದನ್ನು ಬಳಸಿದರೆ ಅಥವಾ ಮರಣಕಾರಕ ಸಂಭವವಿರುವ ಯಾವುದೇ ಬಗೆಯ ಸಾಮಗ್ರಿಯಿಂದ ಸಜ್ಜಾಗಿ ಅದನ್ನು ಬಳಸಿದ್ದು, ಅಂಥವನ ಅಪರಾಧ ಕೋರ್ಟಿನಲ್ಲಿ ಸಾಬೀತಾದರೆ ಅವನಿಗೆ ಮೂರು ವರ್ಷಗಳವರೆಗೆ ವ್ಯಾಪಿಸಬಹುದಾದ ಅವಧಿಯ ಯಾವುದೇ ಬಗೆಯ ಕಾರಾವಾಸ ಇಲ್ಲವೆ ದಂಡ ಇಲ್ಲವೆ ಎರಡನ್ನೂ ವಿಧಿಸಬಹುದು. (ಭಾರತೀಯ ದಂಡ ಸಂಹಿತೆಯ 148ನೆಯ ಖಂಡ).  ದೊಂಬಿಯ ದುರುದ್ದೇಶ ಹೊಂದಿ ಆ ಬಗ್ಗೆ ಅಕ್ರಮ ಕೂಟ ಸೇರಿ ಯಾವುದೇ ವ್ಯಕ್ತಿಯನ್ನು ಪ್ರಚೋದಿಸಿದರೆ ಮತ್ತು ಅಂಥ ಪ್ರಚೋದನೆಯ ಪರಿಣಾಮವಾಗಿ ದೊಂಬಿ ಸಂಭವಿಸಿದರೆ ಅಂಥ ದೊಂಬಿಗೆ ಕಾರಣೀಭೂತವಾದ ವ್ಯಕ್ತಿಗೆ ಒಂದು ವರ್ಷದವರೆಗಿನ ಅವಧಿಯ ಕಾರಾವಾಸ ಇಲ್ಲವೆ ದಂಡ ಇಲ್ಲವೆ ಎರಡನ್ನೂ ವಿಧಿಸಬಹುದು (ಖಂಡ 157).   

	ದೊಂಬಿ ನಡೆಯುತ್ತದೆಂಬ ಸತ್ಯ ಸಂಗತಿಯ ಅರಿವಿದ್ದೂ ಯಾವನಾದರೂ ಉದ್ದೇಶಪೂರ್ವಕವಾಗಿ ಅಂಥ ಸಮೂಹವನ್ನು ಸೇರಿದರೆ ಅಂಥವನು ದಂಡಾರ್ಹನೆನಿಸುತ್ತಾನೆ. ದೊಂಬಿ ಆಗುವ ಸಂಭವವಿದೆಯೆಂದು ನಂಬಲರ್ಹವಾದ ಕಾರಣಗಳು ಕಂಡುಬಂದಲ್ಲಿ ಅದನ್ನು ತಡೆಯಲು ಅಥವಾ ಹತ್ತಿಕ್ಕಲು ಸರ್ವ ಪ್ರಕಾರದ ಕ್ರಮಕೈಗೊಳ್ಳುವುದು ನಾಗರಿಕನೆನಿಸಿಕೊಂಡವನ ಕರ್ತವ್ಯ. ಅದರ ಬದಲು, ಅಂಥ ಕಾನೂನುಬಾಹಿರ ದೊಂಬಿಗಾಗಿ ಯಾರಾದರೂ ಸಂಭಾವನೆ ಪಡೆದಿದ್ದರೆ ಅಥವಾ ನೇಮಕ ಹೊಂದಿದ್ದರೆ, ಅಥವಾ ಅದರಲ್ಲಿ ತೊಡಗಿದ್ದರೆ ಅಥವಾ ಅಂಥ ಸಂಭಾವನೆ ಪಡೆದ ನೇಮಿತನಾದ ವ್ಯಕ್ತಿಗೆ ಆಶ್ರಯ ಅಥವಾ ಸ್ವಾಗತವನ್ನು ಕೊಟ್ಟಿದ್ದರೆ, ಅಂಥ ಕೃತ್ಯವೂ ಖಂಡ 157ರ ಪ್ರಕಾರ ದಂಡಾರ್ಹವಾಗುತ್ತದೆ. ಅಂಥ ಪ್ರಕರಣದಲ್ಲಿ ಮರಣಕಾರಕವಾದ ಯಾವುದಾದರೂ ರೀತಿಯ ಆಯುಧವನ್ನು ಬಳಸಿದ್ದಾದರೆ, ಅದೂ ದಂಡಾರ್ಹ ಅಪರಾಧ.   
     
	ಒಟ್ಟಿನಲ್ಲಿ, ಅಪಾರ ನಷ್ಟದಲ್ಲಿ ಪರ್ಯವಸಾನ ಹೊಂದುವ ದೊಂಬಿ ಅನಾಗರಿಕತೆಯ, ಅಸಂಸ್ಕøತಿಯ ಲಕ್ಷಣ. ಅಂಥ ಸಮಾಜಘಾತುಕ ಘಟನೆಯನ್ನು ಹತ್ತಿಕ್ಕಲು ಆರಕ್ಷಕ ಪಡೆಗೆ ಅಧಿಕಾರ ದತ್ತವಾಗಿರುತ್ತದೆ.    
							   (ಎಸ್.ಎನ್.ಎಂಯು.; ಎಚ್.ಎಸ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ